Thursday, April 5, 2012

ನಾವಲ್ಲ - A Short Story by S.N.Sethuram

ನಾವಲ್ಲ

                    - ಎಸ್.ಎನ್.ಸೇತುರಾಂ 


ನಾವಲ್ಲ... ಅವರು

ನಮ್ಮ ದೇಶದವರಲ್ಲ... ಅವರು!

ನಮ್ಮ ಧರ್ಮ ಅಲ್ಲ... ಅವರು!

ನಗರದ ಪ್ರತಿಷ್ಟಿತ club ಒಂದರಲ್ಲಿ ಚರ್ಚೆ ರಂಗೇರ್ತಿತ್ತು.
November ತಿಂಗಳು, ಮಾಗಿ ಚಳಿ, ನಾಟಿ ಕೋಳಿ, Scotch-Whisky, ಕಡಲ ಮೀನು, Tiger Prawns, ಹರಿದು ಹಂಚಿ ಹೋಗಿದ್ವು... Table ಮೇಲೆ, T.V. ಯ ಎಲ್ಲ Channel ಗಳಲ್ಲೂ ಬಣ್ಣ, ಬಣ್ಣವಾಗಿ ಕಣ್ಣಿಗಂದವಾಗಿ ಕ್ರೌರ್ಯ, ವಿನಾಶ ಬಿತ್ತರಗೊಳ್ಳುತ್ತಿತ್ತು. ಮತ್ತೇರಿದ ಮನಸ್ಸು, ರಂಗೇರಿದ ಕಣ್ಣು, ಮೈ ಸೇರಿ ಕರಗಲಾರದೆ ಕೂಳೆಯಾಗುತ್ತಿದ್ದ ಕೊಬ್ಬು, ಮಿತಿ ಮೀರಿ ತಿಂದು ಜೀರ್ಣವಾಗದೆ, ನಡೆದಾಡೋ ಗೊಬ್ಬರದ ಕಾರಖಾನೆಗಳು ತೊದಲು ನಾಲಿಗೆಯಲ್ಲಿ ಚರ್ಚಿಸುತ್ತಿದ್ವು.

ವಿಷಯ!

“ದೇಶದ ಪ್ರತಿಷ್ಟಿತ ನಗರದಲ್ಲಿ ಆತಂಕವಾದಿಗಳು ಒಂದು ಹೋಟೆಲನ್ನಾಕ್ರಮಿಸಿ 450 ಜನರನ್ನು ಕೊಂದು 1000 ಜನರನ್ನ ಗಾಯಗೊಳಿಸಿ ಪೂರ್ಣ ಪೋಲೀಸ್ ಸೈನ್ಯ ಸಮುದಾಯವನ್ನ ಕರ್ತವ್ಯದಲ್ಲಿ ತೊಡಗಿಸಿದ್ರು. ಕೇವಲ ಹತ್ತು ಜನ ಆತಂಕವಾದಿಗಳು..! ಮೂರನೇ ದಿನ ಕಳೆದಿತ್ತು! ಕಾರ್ಯಾಚರಣೆ ಮುಗಿದಿರಲಿಲ್ಲ!”

ಇಲ್ಲಿ ತಂಪಾದ ಹವೆಯಲ್ಲಿ, ಸುಖದ ಸುಪ್ಪತ್ತಿಗೆಯಲ್ಲಿ ಪರಿಮಳದ ವಾತಾವರಣದಲ್ಲಿ, ಸುರಾಪಾನ ಅಪ್ಸರೆಯರ ಸಾನಿಧ್ಯದಲ್ಲಿ, ದೇಶ ಭಕ್ತಿ ನಿದ್ದೆ ಹತ್ತದೆ ಹೊರಳಾಡುತ್ತಿತ್ತು. ಅಜೀರ್ಣದ ವಾಸನೆ ಗಾಳಿಯಲ್ಲಿ ಕಕ್ಕ್ತಿದ್ರು ಎಲ್ಲ
“ವಂದೇsss ಮಾತರಂ”

ಸೇರಿದ್ರು ನಗರದ ಎಲ್ಲ ಇಲಾಖೆಗಳ ಪ್ರಮುಖರು, ಇದೊಂದು ದಿನಚರಿ. ಸಂಜೆ 8 ಕ್ಕೆ ಸೇರಿ ರಾತ್ರಿ ಹನ್ನೆರಡರವರೆಗೂ ಆಗು ಹೋಗುಗಳನ್ನ ಚರ್ಚಿಸಿ ಮನೆಗೆ ಹೋಗುವ ಕಾರ್ಯಕ್ರಮ, ಈವತ್ತಿನ ವಿಷಯ ನಾವಲ್ಲ... ಅವರು!

* * * * *


“ಒಂದು Hotel ನ್ನ ಸಿಡಿಸೋ ಅಷ್ಟು RDX ತಂದಿದ್ದಾರಂತೆ. ಒಂದು ದಿನದಲ್ಲಿ ಒಬ್ಬ ಹೊತ್ತು ತರೋಕ್ಕಾಗಲ್ಲ, ತಿಂಗಳುಗಟ್ಲೆ ಹತ್ತಾರು ಜನ ಹತ್ತಾರು ಸರ್ತಿ ತಂದಿರ್ತಾರೆ,,. ಏನು ಮಾಡ್ತಿದ್ರು,. check post ಗಳಲ್ಲಿ... ಅರಣ್ಯ ಇಲಾಖೆವಿವೆ.. ಪೋಲೀಸರಿವೆ.. ವಾಣಿಜ್ಯ ತೆರಿಗೆ ಇಲಾಖೆ ಇದೆ.. ಯಾರಿಗೂ ಸುಳುಹು ಸಿಗಲಿಲ್ವ”

“ನೋಡಿದ್ರಲ್ವ ಸಿಗೋದು”.

“ 500 ರೂಪಾಯಿ. ಅಷ್ಟೇ ಸಾಕು.. engine off ಮಾಡೋದು ಬೇಡ. ಕೂತಲ್ಲೇ ನೀಡಿದ್ರೆ ಜೇಬಿಗೆ ಹಾಕ್ಕೊಂಡು salute ಮಾಡ್ತಾರೆ! ”

“ಎಲ್ಲ ಕಳ್ರು”

“ಇವರನ್ನ ಗುಂಡಿಕ್ಕಿ ಕೊಲ್ಲಬೇಕು. ಹೊಲಸು ಜನ. ಹಣ ಸಿಗತ್ತೆ ಅಂದ್ರೆ... ಲಾಡಿ ಬೇಕಾದ್ರು ಬಿಚ್ತಾರೆ... ತಾಯಿಯೇನು? ತಂಗಿಯೇನು?”

ಸಣ್ಣಗೆ ಅರಣ್ಯ ಇಲಾಖೆಯವರಿಗೆ ಅವತ್ತು ಮಧ್ಯಾಹ್ನ ಅದ್ಯಾರೋ ಕಾಡನ್ನ ಒತ್ತುವರಿ ಮಾಡಿಕೊಂಡು ತೋಟ ಮಾಡಿದವ್ರು ಕೊಟ್ಟ ಹಣ ಮತ್ತು ಅದಕ್ಕೆ ಸಹಾಯ ಮಾಡಿದ ನೆನಪಾಯ್ತು. ಅದು ತಾಯಿ, ತಂಗಿ ಲಾಡಿ ಅಂತ ಆಗ ಅನ್ನಿಸಿರಲಿಲ್ಲ, ಇವ್ರಂದಾಗ ಹಾಗನ್ನಿಸಿ ಕೋಪ ಬಂತು! ಕೇಳಿದ್ರು!

“ನೀವು ಯಾವ ಇಲಾಖೇನೋ”

“ಗೊತ್ತಿಲ್ವ”

“ಹೇಳಿ Sir, ನಿಮ್ಮದೇ ನಾಲಿಗೆಯಲ್ಲಿ ನಮ್ಮ ಕಿವಿಯಾರೆ ಕೇಳೋಣ”

ಮೂರನೇಯವರಂದ್ರು
“ದಯವಿಟ್ಟು ವೈಯಕ್ತಿಕ ಮಾಡಿಕೋಬೇಡಿ,”

ಅರಣ್ಯ ಇಲಾಖೆ:
“ಅದೇನು ತಾಯಿ ತಂಗಿ ಲಾಡಿ? ಇವರ ಇಲಾಖೆಲಿ ಹೆಂಡತೀನ ಒಳಗೆ ಕಳಿಸಿ ಹೊರಗೆ ಕಾಯ್ತಿರ್ತಾರೆ!”

ಪತ್ರಕರ್ತರು ತಲೆ ಹಾಕಿದ್ರು,

“ದಯವಿಟ್ಟು... ದಯವಿಟ್ಟು... ದೇಶಕ್ಕೆ ಸಮಸ್ಯೆ. ನಾವು ಒಂದಾಗಿರಬೇಕು. ನಮ್ಮ ನಮ್ಮಲ್ಲಿ ಭಿನ್ನಾಭಿಪ್ರಾಯಗಳಿರತ್ವೆ, ವೈಯಕ್ತಿಕ ಬದುಕಿನಲ್ಲಿ ದೋಷಗಳಿರತ್ವೆ... ಅವನ್ನ ಶಾಂತಿ ಪರ್ವದಲ್ಲಿ ಸಮಾಧಾನವಾಗಿ ಚರ್ಚಿಸಿ ನಿರ್ಣಯಗಳಿಗೆ ಬರಬೇಕು. ದೇಶದ ಭದ್ರತೆಗೆ ಶತ್ರು ಲಗ್ಗೆಯಿಟ್ಟಾಗ ಒಂದಾಗಿ ನಿಲ್ಲಬೇಕು. ಬೇರೆ ಬೇರೆಯಾಗಿ ಬಡಿದಾಡೋದಲ್ಲ!”

ಸತ್ಯ ಅನ್ನಿಸ್ತು. ಸಭೆಯಲ್ಲಿ ಮೌನವಾವರಿಸ್ತು.

ಎಲ್ಲ ಇಲಾಖೆಗಳ ಅರಣ್ಯ, ಪೋಲೀಸ್, ವಾಣಿಜ್ಯ ತೆರಿಗೆ, ಆದಾಯ ತೆರಿಗೆ, corporation, pwd, ಇತ್ಯಾದಿ ಇತ್ಯಾದಿ ಎಲ್ಲದರ ಮುಖ್ಯ ಹುದ್ದೆಗಳಲ್ಲಿದ್ದವರು, ಇಷ್ಟು ಹೊತ್ತು t.v. ದಿಟ್ಟಿಸಿ, ಕೋಳಿ ತಿಂದು, ಹೆಂಡ ಹೀರುತ್ತಿದ್ದವರು ತಕ್ಷಣಕ್ಕೆ ತಾಯಿಯೋ, ತಂಗಿಯೋ, ಹೆಂಡತಿಯೋ ಬತ್ತಲೆ ತಿರುಗುತ್ತಿರಬಹುದು ಎಂದೆನಿಸಿ, ಕಂಡೋರ ಮನೆಯವರಾದ್ರೆ ಪರಿಶೀಲಿಸಿ ಸುಖ ಅನುಭವಿಸಬಹುದು ಎಂದನಿಸಿದ್ರೂ ಅಕಸ್ಮಾತ್ ಸ್ವಂತದ್ದೇ ಆದರೆ, ಸಣ್ಣಗೆ ನಾಚಿಕೆ ಕಾಡಿ ಪ್ರತಿಯೊಬ್ಬರು ವಿಮುಖರಾದರು.

* * * * *


“ವಂದೇss ಮಾತರಂ”
ಸುಶ್ರಾವ್ಯವಾಗಿ mobile phone ಹೊಡಕೊಂಡ್ತು.
ಆದಾಯ ತೆರಿಗೆಯವರಿಗೆ sub-registrar ಅಂದ್ರು,
“ಸ್ವಾಮೀ... ತಮಗೆ ಮನೆಯಿಂದ phone”

“ಇನ್ನು 8.30, ಹೊಡಕೊಳ್ಳಲಿ ಬಿಡಿ, ಹತ್ತರವರೆಗೂ ಪ್ರಳಯವಾದ್ರು ಕಾಯಬೇಕು” ಬಾಯಿಂದ ಏಡಿ ಕಾಲು ಹೊರಗೆ ಚಾಚ್ತಾ ಬಂತು ಮಾತು.

“ಹೆಂಡತೀ... ಹುಷಾರು” ಪೋಲೀಸ್ ಇಲಾಖೆ ಅಂತು.

“ಅದ್ಹ್ಯಾಗೆ ಗೊತ್ತು ಅವರ ಮನೆಯವರು ಅಂತ!”
ಇದು ತೂಕ ಮತ್ತು ಅಳತೆ (weight & measurement) ಇಲಾಖೆ.

ಅರಣ್ಯದವ್ರು ವಿವರಣೆ ಕೊಟ್ರು. “ಹೆಂಡತಿ ಮೊಬೈಲ್ ಇಂದ ಇವರ ಮೊಬೈಲ್ಗೆ ಬಂದ್ರೆ ‘vande mataram’ signature tune ಬರತ್ತೆ, ಬೇರೆಲ್ಲ ಕರೆಗಳಿಗೂ ಸದ್ದು ಬೇರೆ, ಹೆಂಡತೀದಕ್ಕೆ ಮಾತ್ರ ಈ ಸದ್ದು”

“ರಾತ್ರಿ ಒಂಭತ್ತಾಗ್ತಿದ್ದ ಹಾಗೇ ಈ ಕರೆ ಬರುತ್ತೆ, ಎದ್ದು ನಿಲ್ಲಬೇಕು! ಹೊರಡಬೇಕು!” ಲೇಬರ್ ಇಲಾಖೆಯವರು ಪ್ರದರ್ಶಿಸಿದ್ರು.

ಹೊಡಕೊಂಡು ಸಾಕಾಗಿ ಶಬ್ದ ನಿಂತಿತು. ಕುಡಿತ ಜಾಸ್ತಿಯಾಗಿ ನಿಲ್ಲೋಕೆ ಕಷ್ಟವಾಗಿದ್ದ ವಿಜ್ಞಾನಿಗೆ ಏನೋ ಸರಿ ಇಲ್ಲ ಅಂತನ್ನಿಸಿ ಬಾಯ್ಬಿಟ್ರು.

“vande mataram ದೇಶ ಭಕ್ತಿ ಗೇತೆ! ಹಾಕ್ಕೊಂಡ್ರೆ ತಾಯಿ phone ಗೆ ಹಾಕ್ಕೋಬೇಕು, ಹೆಂಡತಿ phone... ಸರಿ ಇಲ್ಲ”

Corporation ನವ್ರಂದ್ರು
“ಗುರುತಿಸೋಕೆ ಒಂದು tune. ಅದರಲ್ಲೇನು ತರ್ಕ”

“ಹಾಗಲ್ಲ, ಒಂದು logic ಬೇಕಲ್ವ”

“ಅದ್ರಲ್ಲೆನ್ರೀ logic”

ವಿಜ್ಞಾನಿ ಒಪ್ಪಲ್ಲ. Corporation ನವನು ಬಿಡೋಲ್ಲ, ಕಡೇಗೆ audit ನವನು.. ಲೆಖ್ಕ ಪರಿಶೋಧಕ ತಲೆ ಹಾಕಿ ಅಂದ

“ದೇಶ ಅಂದ್ರೆ ತಾಯಿ! ಎಲ್ರಿಗೂ ತಾಯೀನ”

ಸೇರಿದ ಎಲ್ಲ ವಿದ್ಯಾವಂತರ ತಲೆಯಲ್ಲಿ ಸಣ್ಣ ಕುಹಕ ಕಾಡಿ ಬುದ್ದಿಯ ಪ್ರಕರತೆ ಮಿಂಚಿ ಅರ್ಧಬೆಂದ ಬಲಿತ ಮಾಂಸ ಜಗಿಯೋ ಮನಸ್ಸಾಗಿ ಚರ್ಚೀಗೆ ಬಿದ್ರು. ಸಾಹಿತ್ಯ ದವರಂದ್ರು... ಸಣ್ಣ ಹುಸಿನಗೆ ಕಣ್ಣ ಮಿಂಚ ಸಂದಲ್ಲಿ

“ದೇಶ ಅಂದ್ರೆ ಭೂಮಿ, ಭೂಮಿ ಅಂದ್ರೆ ಹೆಣ್ಣು, ಇಷ್ಟು ಸ್ಪಷ್ಟ”

ಆಡ್ತಿದ್ವು ತಲೆಗಳು... ಕುಡಿದ ಅಮಲಿನಲ್ಲೋ ವಿಷಯದ ಭಾರದಲ್ಲೋ... ಸತ್ಯಾನ್ವೇಷಣೆಯ ಮಂಪರಿನಲ್ಲೋ... ತಲೆ ಆಡಿಸಿದವು.
“ಭೂಮಿ... ಹುಟ್ಟಿ ಹಾಕತ್ತೆ, ಕಾವು ಕೊಡತ್ತೆ, ನೀರು ಕೊಡತ್ತೆ, ಊಟ ಕೊಡತ್ತೆ... ಬದಲಿಗೆ ಏನೂ ಕೇಳಲ್ಲ. ಅಲ್ಲಿಗೆ ಹೆಣ್ಣು ಅನ್ನೋದು ಸತ್ಯ”

“…………”

“…………”

“ಆದ್ರೆ ದೇಶ ಅನ್ನೋದು ಭೂಮಿ ಮಾತ್ರಾನ? ಅಲ್ಲ, ಅದೊಂದು ಭಾವ... ಅದಕ್ಕೊಂದು ಸಂವಿಧಾನ, ಅದ್ರಿಂದ ಹಕ್ಕು... ಜವಾಬ್ದಾರಿ, ನಡೆಸೋಕೆ ಕಾನೂನು, ನಡೆಯೋಕೆ ಪ್ರಜ್ಞೆ : ಇದೆಲ್ಲ ಸೇರಿದ್ದು ದೇಶ”

“ಹಕ್ಕು ಕೊಡೋದು ಹೆಣ್ಣು, ಜವಾಬ್ದಾರಿ ಕೇಳೋದು ಹೆಣ್ಣು, ಸುಖ ಕೊಡೋದು ಹೆಣ್ಣು, ನೆಮ್ಮದಿ ಕೇಳೋದು ಹೆಣ್ಣು, ಕಾಡೋದು ಹೆಣ್ಣು, ಕದಡೋದು ಹೆಣ್ಣು, ಕೆದಕೋದು ಹೆಣ್ಣು, ತೃಪ್ತಿ ಕೇಳೋದು ಹೆಣ್ಣು, ಕೆಣಕಿ ಜೀವಂತವಾಗಿಡೋದು ಹೆಣ್ಣು, ದೇಶ ಅನ್ನೋದು ಹೆಣ್ಣು ಸತ್ಯ... ಹ್ಯಾಗೆ ಉಪಯೋಗಿಸ್ತೀವಿ ಅದರ ಮೇಲೆ ತಾಯಿ, ಹೆಂಡತಿ, ಮಗಳು.”

“…………”

“…………”

“ತಾಯಿನಾ”

* * * * *


“ಅರಣ್ಯ ಒತ್ತುವರಿಯಾಗಿತ್ತು, ದಾಖಲೆ ಪ್ರಕಾರ ಪ್ರಮಾಣಿಸಿ ಶಿಕ್ಷೆ ಕೊಡಬಹುದಿತ್ತು. ಅವಕಾಶ! ಬಿಟ್ರೆ ಪ್ರಯೋಜನವಿಲ್ಲ. ಕಾಸು ತಗೊಂಡೆ ಮುಚ್ಚು ಹಾಕ್ದೆ, ಮರ ಕಡಿಯೋಕೆ ಬಿಟ್ಟಿದ್ದೀನಿ, ಪ್ರಾಣಿ ಕೊಲ್ಲೋಕೆ ಬಿಟ್ಟಿದ್ದೀನಿ, ಪಾಲು ತಿಂದ್ದಿದ್ದೀನಿ”

“check post ನಲ್ಲಿ ನಿಂತು ದಿನಕ್ಕೆ ಸಾವಿರದಲ್ಲಿ, ದುಡ್ದಿದ್ದೀನಿ. ಹೆಂಡವೋ, ಅಮೃತವೋ, ಪ್ರಾಣಿನೋ, ಪಕ್ಷಿನೋ. ಯಾವುದು ಸಾಗಿಸಿದ್ರೇನಂತೆ... ನನ್ನ ಪಾಲು ನನಗೆ ಬಂದ್ರೆ ಸಾಕು”

“ರಸ್ತೆ ಮೇಲೆ ನಿಲ್ಲೋಕೆ ಯೋಗ್ಯತೆಯಿಲ್ಲದ ವಾಹನಗಳಿಗೆ... ಓಡಿಸಬಹುದು ಧಾರಾಳವಾಗಿ... permit ಕೊಟ್ಟಿದ್ದೀನಿ. Accident ಆಗತ್ತೆ. ಪ್ರಕೃತಿ ಮಲಿನಗೊಳ್ಳುತ್ತೆ. ಕಾಸು ಬಂದಿಲ್ವಾ ‘ಸಾಯಲಿ’!”

“ತೂಕ ಒಂದು k.g. ಅಂತಾರೆ. 900 gram ಕೊಡ್ತಾರೆ. ಏನು ಒಂದು ನೂರು gram ಕಮ್ಮಿ ಕೊಟ್ರೆ... ನನಗೆ ಬರೋದು ತಲುಪಿಸಿದ್ರಾಯ್ತು”

“ಕೊಲೆ ಮಾಡಿದವನ್ನ ಗಲ್ಲಿಗೆ ಹಾಕು. ಕಳ್ಳನ್ನ ಹಿಡಿದು ಒಳಕ್ಕೆ ಹಾಕು... ಸಂಬಳ ಕೊಡಲ್ವಾ. ಶಿಕ್ಷೆ ಕೊಟ್ರೆ ಬರೀ ಸಂಬಳ.. ಪಥ್ಯ.. ಇವರ ಜೊತೆ ಶಾಮಿಲಾದ್ರೆ.. ಪಾಲು ಕೊಡ್ತಾರೆ.. ಸುಖ, ಐಶಾರಾಮ!”

“ವಾಣಿಜ್ಯ ತೆರಿಗೆ, ಲೆಖ್ಖ ಇಡಬೇಕು ಅಂದ್ರೆ ರಸೀತಿ ಹರೀಬೇಕು, ರಸೀತಿ ಅಂದ್ರೆ ಕಾಗದ, ಈಗಿರೋ ಪರಿಸ್ಥಿತೀಲಿ ಕಾಗದ ವೇಷ್ಟು, ಕಮ್ಮಿ ಖರ್ಚಾದ್ರೆ ಅಷ್ಟು ಒಳ್ಳೇದು. ಕದೀಲಿ ವಾಣಿಜ್ಯ ತೆರಿಗೆ.. ಸ್ವಲ್ಪ ಇಲ್ಲೂ ತಳ್ಳಲಿ”
“ಸರ್ಕಾರಿ ವೈದ್ಯ ನಾನು, college ಗೆ ಸೇರೋಕೆ ಹತ್ತು ಲಕ್ಷ ಕೈಬಿಟ್ಟಿತ್ತು. ಓದು ಮುಗಿಸಿ ಮತ್ತೆ ಓದೋಕೆ ಇಪ್ಪತ್ತು ಲಕ್ಷ.. ಹೆಸರು ಕೆಡಲಿ. ಜನ ಸಾಯಲಿ.. ಕಾಸು.. ಅದು!”

“ಕದ್ದೊರೆಲ್ಲ ಮೆದ್ದು ಕೂರ್ತಾರೆ. ಬರಲಿ ಆದಾಯ ತೆರಿಗೇಗೆ.. ರಕ್ತ ಕೀವು ಸಮೇತ ಜೀವ ಸೆಳೀತೀನಿ”

Zoo ಅವ್ನು ಹುಲಿ ತಿನ್ನೋದ್ರಲ್ಲಿ ಕದ್ದಿದ್ದ, ಮುಜರಾಯಿ ನವನು ದೇವರಿಗೆ ಬಂದ ಸೀರೆ ಹೆಂಡತೀಗೆ ಉಡಿಸಿದ್ದ, ಲೆಖ್ಖ ಪರಿಶೋಧಕ ಮುಚ್ಚಿ ಹಾಕೋಕೆ ತಿಂದ. ಕೊನೇಗೆ ಗಡಿ ಕಾಯೋನು ಶತ್ರುನ ಒಳಗೆ ಬಿಟ್ಟು ಬದುಕ್ದ. ಬರೀಬೇಕಾದ ಪತ್ರಕರ್ತ ಬರೀದೇ, ಬರೀದೇ ದುಡಿದಿದ್ದ. ಒಬ್ಬರನ್ನೊಬ್ರು ಮುಖ ನೋಡಿಕೊಂಡು ನಿಂತ್ರು. ಇಂಥ ಇಲಾಖೇ ಅಂತ ಹೇಳಿ... ಹೀಗೆ ಕದ್ದಿದ್ದೀರಿ ತೋರಿಸ್ತೀವಿ... ಅನ್ನೋ ಭಾವದಲ್ಲಿ.

T.V ಯ ಚರ್ಚೆ ಬಿತ್ತರವಾಗುತ್ತಿತ್ತು, ಪ್ರತಿಷ್ಠಿತ ಜನ ಬುದ್ಧಿಜೀವಿಗಳು, ಪತ್ರಕರ್ತರು, ವಕೀಲರು, Anchor ನ ನೇತೃತ್ವದಲ್ಲಿ ಚರ್ಚಿಸ್ತಿದ್ರು ಆತಂಕವಾದಿಗಳ ಆಕ್ರಮಣದ ಬಗ್ಗೆ, ಸರ್ಕಾರದ ನಿಷ್ಕ್ರಿಯತೆಯ ಬಗ್ಗೆ, ರಾಜಕಾರಣಿಗಳ ಶಂಡತನದ ಬಗ್ಗೆ. ತಮ್ಮ ಅಣ್ಣ ತಮ್ಮ ಅಕ್ಕ ತಂಗಿಯರ ಜೀವಕ್ಕಾದ ಅಪಾಯದ ಬಗ್ಗೆ.

ಕೊನೇಗೆ ಠರಾವಾಯ್ತು.

“ಈ ರಾಜಕಾರಿಣಿಗಳು ಕಳ್ರು, ತೆರಿಗೆ ಕಟ್ಟಬಾರ್ದು!”

ಇಷ್ಟು ದಿನ ಕಟ್ಟದೆ ಕದ್ದ ತೆರಿಗೇಗೆ ಈವತ್ತು ಸಮಜಾಯಿಷಿ ಸಿಕ್ಕಿ ಸಂತಸದಲ್ಲಿ ತೇಲಾಡಿದ್ರು.. ಉರೀತಿದ್ದ ಬೆಂಕೀಲಿ ಗೆಣಸು ಬೇಯಿಸ್ಕೊಂಡು,

ರಾಜಕಾರಣಿ ನಕ್ಕ
“ನಿಮ್ಮ ಯೋಗ್ಯತೇಗೆ ನನಗಿಂತ ಪ್ರತಿನಿಧೀನಾ?”

* * * * *


ದೇಶ ಹೆಣ್ಣು ಹೌದು
ತಾಯಿ?.... ಇಲ್ಲ
ತಂಗೀನಾ, ಮಗಳಾ, ಕಾಯಲಿಲ್ವೇ... ಅಲ್ಲ!
ಹೆಂಡತೀನಾ.. ಕಷ್ಟ. ಎಲ್ಲಿ ಬೇಕಂದ್ರಲ್ಲಿ.. ಹ್ಯಾಗೆ ಬೇಕು ಹಾಗೆ.. ಇಷ್ಟ ಬಂದಷ್ಟು.. ಸೆರೆಗೆಳೆದದ್ದು.. ಅಲ್ಲ!
ಹೆಂಡತೀನೂ ಅಲ್ಲ!

ಮತ್ತೆ?

* * * * *


Phone ಹೊಡಕಂಡ್ತು

“ವಂದೇss ಮಾತರಂ”

ತಗಂಡೊಂದ್ರು

“ಈಗ ಹೊರಟೆ!”

ಆ ಕಡೆಯಿಂದ ಮಾತು ನಿಲ್ಲಲಿಲ್ಲ, ಒಂದ್ಹತ್ತು ನಿಮಿಷದ ವಿಷಯ ಬಂತು.. ಇವರ ಮುಖ ಕಪ್ಪಿಟ್ಟು ಕುಸಿದ್ರು. ಏನು.. ಏನಾಯ್ತೆಂಬ ಕಾತುರದಲ್ಲಿ ವಿಚಾರಿಸ್ತಾ... ಕುಡುಕನ ಸುತ್ತ ಕಳ್ಳರು ಲಂಪಟರು ನೆರೆದ್ರು.

ದೂರದಲ್ಲಿ ಅದ್ಯಾರೋ ಕೇಳಿದ

“ಏನಂತೆ”
ಇನ್ಯಾರೋ ಅಂದ್ರು

“ಇವರ ಮಗ ಅದೇ ಊರಿಗೆ ಹೋಗಿದ್ದನಂತೆ. ಅದೇ hotel ಲ್ಲಿದ್ದನಂತೆ. ಈಗ phone ಮಾಡಿದ್ರೆ ಎತ್ತತ್ತಿಲ್ಲವಂತೆ. ಅಲ್ಲಿ ದಿನಕ್ಕೆ ಖರ್ಚು ಲಕ್ಷವಾಗತ್ತಂತೆ. ಕದ್ದ ಕಾಸು ಅಂತ ಸ್ವಂತ ಹೆಸ್ರು ಕೊಡಬೇಡ ಅಂದಿದ್ರಂತೆ. ಯಾವ ಹೆಸರಿನ ಮೇಲೆ ಉಳಕೊಂಡ ಗೊತ್ತಿಲ್ವಂತೆ. ಹೆಣವಾಗಿದ್ದಾನಾ.. ಗಾಯಾನ.. ಇಲ್ಲ ಬಂಧೀನಾ... ಹುಡುಕಿಸೋದು ಹ್ಯಾಗೆ?”

ಹೆಣವಾದ್ರೆ... ಕೋಟಿ ಕೊಡ್ತಾರೆ

ಗಾಯವಾದ್ರೆ... ಲಕ್ಷ ಕೊಡ್ತಾರೆ

Claim ಮಾಡೋದು ಹ್ಯಾಗೆ

ಹಣನಾ... ಹೆಣನಾ

Phone ಮತ್ತೆ ಹೊಡಕೊಂಡ್ತು “ವಂದೇ ಮಾತರಂ”

ಮನುಷ್ಯ ಎತ್ತಿಕೊಂಡು ಕೇಳಿಸ್ಕೋತ್ತಿದ್ದ... ದುರಂತದ ವಿವರಗಳ್ನ

ಸುತ್ತ ಇದ್ದೋರು ಚದುರಿದ್ರು.. ಅವನ್ನ ಒಂಟಿ ಮಾಡಿ..

ಸಧ್ಯ ನಮ್ಮ ಮಕ್ಳಲ್ಲ... ಅವನ ಮಗ.

ಕಳಕೊಂಡಿದ್ದು ಅವನು... ನಾವಲ್ಲ!ABOUT AUTHORActor, Director, Producer, Story, Screenplay, Dialogue writer of popular tele serials Manthana, Dibbana, Anavarana.

Former theatre artist and also Income Tax Employee

5 comments:

 1. ಐನಾತಿ ಕತೆ! ಗದ್ಯ ರೂಪದ ಕಾವ್ಯ... ಏನ್ ಬರೀತೀರಿ ಸಾರ್! :)
  ಭಾವನೆಗಳ ರುದ್ರತಾಂಡವ...ಕುಹಕ..ಅಣಕ...ವ್ಯಂಗ್ಯ.. ಹದವಾಗಿ ಬೆರಸಿ ಬೆರಣಿ ತಟ್ಟೋ ಲೆವೆಲ್ಲಿಗೆ ಬಡೀತೀರಿ ರೂಪಕಗಳ ಮೂಲಕ... ಅರ್ಥವಾದ್ರೆ ಅನುಭವಿಸ್ತಾರೆ ಇಲ್ಲವಾದರೆ ನಕ್ಕು ಇಲ್ಲ ಅಹುದಹುದೆನಿಸಿ ಸುಮ್ಮನಾಗ್ತಾರೆ ಅಂತ... ಹ್ಯಾಟ್ಸ್ ಆಫ್!

  “ಹಕ್ಕು ಕೊಡೋದು ಹೆಣ್ಣು, ಜವಾಬ್ದಾರಿ ಕೇಳೋದು ಹೆಣ್ಣು, ಸುಖ ಕೊಡೋದು ಹೆಣ್ಣು, ನೆಮ್ಮದಿ ಕೇಳೋದು ಹೆಣ್ಣು, ಕಾಡೋದು ಹೆಣ್ಣು, ಕದಡೋದು ಹೆಣ್ಣು, ಕೆದಕೋದು ಹೆಣ್ಣು, ತೃಪ್ತಿ ಕೇಳೋದು ಹೆಣ್ಣು, ಕೆಣಕಿ ಜೀವಂತವಾಗಿಡೋದು ಹೆಣ್ಣು, ದೇಶ ಅನ್ನೋದು ಹೆಣ್ಣು ಸತ್ಯ... ಹ್ಯಾಗೆ ಉಪಯೋಗಿಸ್ತೀವಿ ಅದರ ಮೇಲೆ ತಾಯಿ, ಹೆಂಡತಿ, ಮಗಳು.” - ಕಳ್ದೋಗಿದೀನಿ...:)

  ReplyDelete
 2. ತುಂಬಾ ಚೆನ್ನಾಗಿದೆ ಸರ್!! ನಿಮ್ಮ ಅನಾವರಣ ಧಾರವಾಹಿ ತಪ್ಪದೇ ನೋಡ್ತಾ ಇದ್ದೆ ಆಫೀಸಿನಿಂದ ಅನಾವರಣ ಧಾರವಾಹಿಗಾಗೆ ಬೇಗ ಬರುತ್ತಿದೆ ಅದು ಇದ್ದಕ್ಕೆ ಇದ್ದ ಹಾಗೆ ನಿಂತು ಹೋಯಿತು ನೀವು ಬಳಸೋ ಸಂಭಾಷಣೆ ಶೈಲಿ ತುಂಬಾ ಇಷ್ಟ ಆಗುತ್ತೆ ಸರ್. ನಿಮ್ಮ ಆ ನೇರ, ತೀಕ್ಷ್ಣ, ವ್ಯಂಗ್ಯ, ಅಣಕ ಸಂಭಾಷಣೆಯನ್ನು ತುಂಬಾ ಮಿಸ್ ಮಾಡ್ಕೊತಿದ್ದೆ ಇಂದು ನಿಮ್ಮ ಈ ಲೇಖನ ಓದಿ ಸಂತೋಷವಾಯಿತು ಇದನ್ನು ಸಂಬಂಧಪಟ್ಟ ಇಲಾಖೆಯವರು ಓದಬೇಕು ಓದಿ ಕರ್ಚಿಫ್ ತೆಗೆದುಕೊಂಡು ಮುಖ ಒರೆಸಿಕೊಂಡಾರು. :)
  ಸಾಧ್ಯವಾದರೆ ಅನಾವರಣ ಧಾರವಾಹಿ ಮತ್ತೆ ಪ್ರಾರಂಭಿಸಿ.

  ReplyDelete
 3. Hi Sir, all your serials were watched and me and my mother are a big fan of yours. I have been liking your style of dialogue delivery since "College Tharanga" I guess. In Anavarana the way you portrayed all the characters was awesome, personally I appreciated Manasa's character being in an IT corporate world myself and knowing one such person closely.

  ReplyDelete
 4. ಕಥೆ ಬಹಳವೇ ಚೆನ್ನಾಗಿದೆ.. ಕಥೆ ಅನ್ನೋದಕ್ಕಿಂತ ಒಂದು scene ನೋಡಿದ ಹಾಗೆ ಭಾಸವಾಯ್ತು.. character ಎಲ್ಲ ನಿಜವಾಗಿ ನಮ್ಮೆದುರು ಬಂದು ಮಾತಾಡಿದ ಹಾಗೆ ಅನ್ನಿಸ್ತಿತ್ತು. ಬಹುಷಃ ಮಂಥನ ಅನಾವರಣದ ಸ್ಕ್ರಿಪ್ಟ್ ಹೀಗೆ ಇದ್ದಿರಬಹುದೇನೋ..

  “ಹಕ್ಕು ಕೊಡೋದು ಹೆಣ್ಣು, ಜವಾಬ್ದಾರಿ ಕೇಳೋದು ಹೆಣ್ಣು, ಸುಖ ಕೊಡೋದು ಹೆಣ್ಣು, ನೆಮ್ಮದಿ ಕೇಳೋದು ಹೆಣ್ಣು, ಕಾಡೋದು ಹೆಣ್ಣು, ಕದಡೋದು ಹೆಣ್ಣು, ಕೆದಕೋದು ಹೆಣ್ಣು, ತೃಪ್ತಿ ಕೇಳೋದು ಹೆಣ್ಣು, ಕೆಣಕಿ ಜೀವಂತವಾಗಿಡೋದು ಹೆಣ್ಣು, ದೇಶ ಅನ್ನೋದು ಹೆಣ್ಣು ಸತ್ಯ... ಹ್ಯಾಗೆ ಉಪಯೋಗಿಸ್ತೀವಿ ಅದರ ಮೇಲೆ ತಾಯಿ, ಹೆಂಡತಿ, ಮಗಳು.”
  ಪಾತ್ರ ಕೇವಲ ನಮ್ಮ ಭಾವದ ಮೇಲೆ , ಮೂಲ ರೂಪ ಎಂದಿಗೂ ಒಂದೇ . ಎಷ್ಟು ಸತ್ಯ ಆಲ್ವಾ?

  "ಹೆಣವಾದ್ರೆ... ಕೋಟಿ ಕೊಡ್ತಾರೆ, ಗಾಯವಾದ್ರೆ... ಲಕ್ಷ ಕೊಡ್ತಾರೆ..
  Claim ಮಾಡೋದು ಹ್ಯಾಗೆ, ಹಣನಾ... ಹೆಣನಾ??" ಈ ಎರಡು ಸಾಲುಗಳು ಸಾಕು ನಮ್ಮ ಇಂದಿನ ಸಮಾಜದ ಸಂಪೂರ್ಣ ಚಿತ್ರಣವನ್ನ ಕೊಡಕ್ಕೆ..

  ReplyDelete