Friday, June 22, 2012

ಯುಗಾದಿ

ಯುಗಾದಿ
- ಎಸ್.ಎನ್.ಸೇತುರಾಂ


ಯುಗಾದಿ
ಯುಗಾದಿ!
ಯುಗದ ಆದಿ!
ಬಿಸಿ ಬೆಲ್ಲ, ಹಸಿ ಕಬ್ಬು,
ಕಿತ್ತಳೆ, ಕಲ್ಲಂಗಡಿ,
ಹಸಿ ದ್ರಾಕ್ಷಿ, ಹೊಸ ಅಕ್ಕಿ,
ಅಲ್ಲಿ ಅಮೇರಿಕಾದಲ್ಲಿ ಮಗಳು ಬಸಿರು....
ಇಲ್ಲಿ ಮೂಲೆ ಮಂಚದಲ್ಲಿ ಅಪ್ಪನ ಉಸಿರು ಏದುಸಿರು.
ಅಲ್ಲಿ ಅಂದಿದ್ದಾರೆ ಡಾಕ್ಟ್ರು...
ಸಧ್ಯಕ್ಕಿಲ್ಲ! ವಾರ ಹತ್ತು ದಿನ ಕಳೀಲಿ!
ಇಲ್ಲೂ ಅಂದಿದ್ದಾರೆ ಡಾಕ್ಟ್ರು ....
ಸಧ್ಯಕ್ಕಿಲ್ಲ! ವಾರ ಹತ್ತು ದಿನ ಕಳೀಲಿ!
ಇವಳಗಲ್ಲಿ ಹೋಗಬೇಕು
ಬಸಿರು, ಬಾಣಂತನ, ಸಂಭ್ರಮದ ಚಪಲ.
ನನಗೆ ಇವಳಿಲ್ಲೇ ಇರಬೇಕು,
ಸೂತಕಕ್ಕೆ ಜೊತೆ !
ಅವಳಿಲ್ದೆ ನನಗಾಗೋಲ್ಲ !ಸಾವು ಎದುರಿಸಲಾರೆ !
ರಾತ್ರಿ ನಿದ್ದೆ ಗೆಟ್ಟು ಕಾದೆ
ಅಲ್ಲಿಂದ ಸುದ್ದಿ ಬರಬಹುದು.
ಹಗಲು ತೂಕಡಿಸ್ತಾ ಕಾದೆ !
ಇಲ್ಲೀ ಮನುಷ್ಯ ಕಂತೆ ಒಗೀಬಹುದಾ ?
ಇವಳು ಕೇಳ್ತಾಳೆ !
Doctor ಏನಂತಾರೆ ? ಎಷ್ಟು ದಿನವಂತೆ ?
ಸಧ್ಯಕ್ಕಿಲ್ವಂತ ?......
ಏನೂ ಮಾಡೋಕ್ಕಾಗೊಲ್ವಂತ? !
ಕೊಂದೇಬಿಡ್ತಾಳೆ ಅನ್ನೋ ಭಯ ಕಾಡಿ
ಮಗಳನ್ನ ಕೇಳ್ದೆ
Doctor ಏನಂತಾರೆ ? ಎಷ್ಟು ದಿನವಂತೆ ?
ಸಧ್ಯಕ್ಕಿಲ್ವಂತ ?......
ಏನೂ ಮಾಡೋಕ್ಕಾಗೊಲ್ವಂತ? !
ಬೆಳಿಗ್ಗೆ phone ಬಂತು ..
ಮಗಳಂದ್ಲು ,
ಕಾಯೋದು ಕಷ್ಟ ಅಂತ Doctorಗಂದೆ
Induce ಮಾಡಿದ್ರು
ಹೆತ್ತೆ !
ಗಂಡು ಮಗು
ಒಳಗಿಂದ ಇವಳು ಕೂಗಿದ್ಲು,
ಮುಗೀತು ಅಂತ ಕಾಣತ್ತೆ
ಗಂಗೆ ಚೊಂಬು ಒಡೀರಿ
ನಾಲ್ಕು ತೊಟ್ಟು ನೀರು ಬಿಡೋ ಅಷ್ಟ್ರಲ್ಲಿ
ಅಪ್ಪ ಹೊರಟಾಗಿತ್ತು,
ಪಿಚ್ಚೆನಿಸಿತು.
ಅಲ್ಲಿ Induce ಮಾಡಿದ್ದಕ್ಕೆ ಇಲ್ಲಿ ಹೋರಟುಬಿಟ್ರಾ !!!

********************************************

ಹೊಸದು ಹುಟ್ಟಿದ್ರೆ ಸಾಲದು
ಹಳತು ಹೋಗಲೂಬೇಕು
ಯುಗಾದಿ
ಇದು ಯುಗದ ಆದಿ

******************************************

ಇತ್ತೀಚಿಗೆ ಬೇವಲ್ಲಿ ಕಹಿನೇ ಇಲ್ಲ ,
ಅಲ್ಲೂ farmದು ಬಂದಿರಬೇಕು.
ಅದ್ಯಾಕೋ ಬೆಲ್ಲದಲ್ಲೂ ಸಿಹಿ ಕಮ್ಮಿ ,
ಅದೇನೋ chemical ಹಾಕ್ತಾರಂತೆ.
ಎಲ್ಲದ್ರಲ್ಲೂ interfere ಆಗ್ತಾರೆ,
ಸ್ವಾಭಾವಿಕವಾಗಿ ಯಾವುದೂ ಆಗೋದೇ ಇಲ್ಲ ..
ವಯಸ್ಸಾಗೋಕ್ ಮೊದಲೇ ಮುದುಕರಾಗ್ತಾರೆ,
ಆಯಸ್ಸು ತೀರಿದ್ರೂ ಅಡ್ಡಾಡತಾನೆ ಇರ್ತಾರೆ !...
ಸಾವು ಬರೋದೇ ಇಲ್ಲ!
ಬೇವಿಗೆ ಬೆಲ್ಲ ಬೇರೆಸ್ತಿದ್ವಿ ,
ನಾಲಗೆಗೆ ಕಹಿ ತಾಕದಿರಲಿ ಅಂತ .....
ಈಗ ಬೆಲ್ಲಕ್ಕೆ ಬೇವು ಬೆರೆಸಬೇಕು.
ಕಹಿನೋ, ಸಿಹಿನೋ, ನಾಲಗೆಗೆ ಯಾವುದೋ ಒಂದು
ರುಚಿ ಇರಲಿ ಅಂತ !

ಯುಗಾದಿ !
ಇದು ಯುಗದ ಆದಿ !

No comments:

Post a Comment