Friday, June 22, 2012

ಪೂಜೆ

ಪೂಜೆ
- ಎಸ್.ಎನ್.ಸೇತುರಾಂ


ಹೆಂಡದಂಗಡಿಯಲ್ಲಿ, ಶುಕ್ರವಾರದ ಪೂಜೆ
ಎಡಕ್ಕೆ ಸರಸ್ವತಿ, ಮದ್ಯೆ ಗಣಪ, ಬಲಕ್ಕೆ ಲಕ್ಷ್ಮಿ
ಕೈ ಮುಗಿದು ನಿಂತ ಅಂಗಡಿಯೊಡೆಯ...

ಮುಂದೆ ಚಪ್ಪಲಿ,ಹಿಂದಕ್ಕೆ ಇವನು, ಯಮ
ಅಲ್ಲಲ್ಲಿ ಚದುರಿದ ,ಮೀಸೆ ಚಿಗುರದ ,
ಮೈ ಬಲಿಯದ, ಸ್ನಾನ ಕಾಣದ ,
ಕೆದರು ಕೂದಲಿನ ಕೆಂಗಣ್ಣ , ನಚಿಕೇತರು..!!

ಅರೆ ಬೆತ್ತಲೆ ಬ್ರಾಹ್ಮಣ ,ಗಣಗಣ ಘಂಟೆ
ಗುಣು ಗುಣು ಮಂತ್ರ
ಕತ್ತಲ ಅಂಗಡಿಯಲ್ಲಿ ,ಗಾಳಿ ಬೆಳಕಿನ ಬರದಲ್ಲಿ ,
ಕಮಟು ವಾಸನೆ,ಕಾವು ಕರ್ಪೂರ ,
ಹಳಸಲು ಹವಿಸ್ಸು ....
ಹೆಂಡದಂಗಡಿಯಲ್ಲಿ ಶುಕ್ರವಾರದ ಪೂಜೆ...

* * * *

ವ್ಯಾಪಾರ ವ್ರುದ್ದಿಸಲಿ , ತಿಜೋರಿ ತುಂಬಲಿ ,
ಪೂರ್ತ ಸಂತತಿ ,ಕುಡುಕರಾಗಿ, ಮಂಪರಲ್ಲಿ
ತೂರಾಡಲಿ....
ಹೆಂಡದಂಗಡಿಯಲ್ಲಿ, ಶುಕ್ರವಾರದ ಪೂಜೆ..

* * * *

ಸರಕು ಸರಕಾರದ್ದೇ ...ಕುಡಿದ ರೂಪಾಯಿಯಲ್ಲಿ
ಮುಕ್ಕಾಲು ಬೊಕ್ಕಸಕ್ಕೆ......
ಕಳ್ಳ ಪೊಲೀಸರಿಗೆ , ಸುಳ್ಳು ಮೇಷ್ಟ್ರಿಗೆ
ಇಲ್ಲದ ರಸ್ತೆಗೆ ,ಕೊಡದ ಕೊಡ ನೀರಿಗೆ ,
ಬರದ ಬರ ಪರಿಹಾರಕ್ಕೆ ,ನಿಮ್ಮದೇ ಹಣ
ಕುಡಿದ ರೂಪಾಯಿಯಲ್ಲಿ, ಮುಕ್ಕಾಲು ಬೊಕ್ಕಸಕ್ಕೆ ...
ಹೆಂಡದಂಗಡಿಯಲ್ಲಿ, ಶುಕ್ರವಾರದ ಪೂಜೆ...

* * * *

ತನ್ನಿ...ಎಲ್ಲಿಂದಾದರೂ ತನ್ನಿ..ಯಾವುದಾದರೂ ಆದೀತು ..
ದಿನದ ಕೂಲಿ, ತಿಂಗಳ ಸಂಬಳ ,
ಸ್ವಂತದಾದರೂ ಸೈ , ಅಪ್ಪನ ಕಿಸೆಇಂದ ಕದ್ದದಾದ್ರೂ ಸೈ..
ಮಗಳ ಮದುವೆಯ ಕಾಸು , ಮಗನ ಓದಿನ ಕಾಸು..
ಮೊಮ್ಮಗಳ ಹಾಲಿನ ಕಾಸು.
ಹೆಂಡತಿಯ ಉಳಿತಾಯ...ಅಪ್ಪನ ಪಿಂಚಣಿ ...
ಅಮ್ಮನ ತಾಳಿ,ಪಿತ್ರುಶೇಷ ..
ತನ್ನಿ...ಯಾವುದಾದರೂ ಆದೀತು,
ಕುಡಿದ ರೂಪಾಯಿಯಲ್ಲಿ ಮುಕ್ಕಾಲು ಬೊಕ್ಕಸಕ್ಕೆ...
ಇವತ್ತು ಶುಕ್ರವಾರ ..
ಹೆಂಡದಂಗಡಿಯಲ್ಲಿ , ಶುಕ್ರವಾರದ ಪೂಜೆ...

* * * *

ದೇಶ ನಿನ್ನದು,ರಾಜ್ಯ ನಿನ್ನದು..ಊರು,ಕೇರಿ,ರಸ್ತೆ ,
ಗಿಡ, ಮರ, ಗಾಳಿ, ಬೆಳಕು,ನೀರು,ಎಲ್ಲಕ್ಕೂ ನೀನೆ ಒಡೆಯ..
ಮೈಯ ಹಸಿ ಮಾಂಸ ಕಲಸಿ,ಆಕಾರ ಮಾಡಿ,
ಸುಟ್ಟ ಇಟ್ಟಿಗೆಯ ಬೃಹತ್ ಮಹಲು..
ನೀವಿಲ್ಲಿ ಬಸಿದ ಚರ್ಮ, ಅಲ್ಲಿ ನುಣುಪು ಗೋಡೆ,ನೆಲ..
ಇಲ್ಲಿ ನಿಟ್ಟುಸಿರು,ಬಿಟ್ಟುಸಿರು,ಅಲ್ಲಿ ತಂಪು ಹವೆ..
ನಿನ್ನ ಪೀಳಿಗೆಯ ಜೀವರಸ, ಅಲ್ಲಿ ಕರಗದ ಕೊಬ್ಬು..
ತಾಯಿ, ಹೆಂಡತಿ, ಮಗಳು, ಹಗಲು ಗರತಿಯರಿಲ್ಲಿ
ಅಲ್ಲಿ ಕೇಳಿಗೆ ನಿಂತ ರಾತ್ರಿ ರಾಣಿಯರು..
ವ್ಯಾಪಾರ ವ್ರುದ್ದಿಸಲಿ, ತಿಜೋರಿ ತುಂಬಲಿ.
ಪೂರ್ತ ಸಂತತಿ ಕುಡುಕರಾಗಲಿ..
ಮಂಪರಲಿ, ತೂರಾಡಲಿ...
ಸರಕಾರದ್ದೇ ಸರಕು...
ಕುಡಿದ ರೂಪಾಯಿಯಲ್ಲಿ ,ಮುಕ್ಕಾಲು ಬೊಕ್ಕಸಕ್ಕೆ..
ಇವತ್ತು ಶುಕ್ರವಾರ,ಹೆಂಡದಂಗಡಿಯಲ್ಲಿ ಶುಕ್ರವಾರದ ಪೂಜೆ..

* * * *

ಎಡಕ್ಕೆ, ಸರಸ್ವತಿ ಸಂತತಿ ಕುಡಿದು ತೊದಲ್ಥಿದೆ..
ಮಾತು ಕೊಡಲಾಗದೆ , ವಿದ್ಯೆ ಕೊಡಲಾಗದೆ ಕೂತ ಮೂಕ ಸರಸ್ವತಿ..
ಮದ್ಯೆ ಗಣಪ,ಹಾದರಕ್ಕೆ,ಲಂಪಟತನಕ್ಕೆ,ಮೋಸಕ್ಕೆ, ಸುಲಿಗೆಗೆ,
ವಿಘ್ನ ಒಡ್ಡದ,----- ಗಣಪ..,ಬಲಕ್ಕೆ ಲಕ್ಷ್ಮಿ.... ಗಂಡ ನಾರಾಯಣ ,.
ಕಾವ ದೇವ ನಾರಾಯಣ, ಭಗವಂತ ನಾರಾಯಣ .....
ಪಾಪ,ಆಯುಸ್ಸು ತೀರುವ ಮೊದಲೇ ಕುಡಿದು ಸತ್ತನಂತೆ..
ವಿಧವೆ ಲಕ್ಷ್ಮಿ.. ಪಾಪ , ಬದುಕಿಗೆ..ಉದರ ಪೋಷಣೆಗೆ..ಅಸ್ತಿತ್ವಕ್ಕೆ
ಕುಬೇರರ ಹಾಸಿಗೆಇಂದ, ಹಾಸಿಗೆಗೆ .........,
``ಉಧೋ ..ಉಧೋ...ಉಧೋ..``

* * * *

ಹೆಂಡದಂಗಡಿಯಲ್ಲಿ , ಶುಕ್ರವಾರದ ಪೂಜೆ...

* * * *

No comments:

Post a Comment