Sunday, December 15, 2013

ಭವ“ಕೂತ್ಕೋ” ಅಂದೆ

ಕೂರಲಿಲ್ಲ ಅವಳು.

ಮೆತ್ತಗಾಗಿದ್ದಾಳೆ ಅನ್ನಿಸಿತು. ಮುಖ ಬಾಡಿತ್ತು. ಕಳೆ ಸಣ್ಣಗೆ ಇಳಿದಿತ್ತು. ಆದರೆ ಸೌಂದರ್ಯ ಮಾಸಿರಲಿಲ್ಲ. ದುಂಡು ಮುಖ, ಅಗಲ ಕಣ್ಣುಗಳು, ಸ್ವಂತ ಸೌಂದರ್ಯ ಅರಿತಿರೋ ಗರ್ವದ ಭಾವ...ಇವು ನನ್ನನ್ನ ನಲವತ್ತು ವರ್ಷಗಳ ಹಿಂದೆ ಕಾಡಿದ್ದು. ಈವತ್ತಿಗೂ ಅದೇ ಕಾಡ್ತಿದೆ.

“ಅವತ್ತು ಮನಸ್ಸು ಹೃದಯಗಳನ್ನು ಆಕ್ರಮಿಸಿಕೊಂಡವಳು ಈವತ್ತಿಗೂ ತೆರವು ಮಾಡಿಲ್ಲ ಕಣೆ. ಅರ್ಥವಾಗ್ತಿಲ್ಲ ನಿನಗೆ. ಬದುಕಿನ ಎಲ್ಲ ಸಾಧನೆಗಳು ನಿನ್ನನ್ನ ಮೆಚ್ಚಿಸೋದಿಕ್ಕೆ. ಎಲ್ಲ ಗಂಡಸರ ಹಾಗೆ ನಾನೂ ಪುಂಡ. ಪುಂಡಾಟಿಕೆ ತೋರಲಿಲ್ಲ...ನಿನ್ನ ಮೆಚ್ಚಿಸೋದಕ್ಕೆ. ಬದುಕಿನ ವ್ಯವಹಾರಗಳಲ್ಲಿ ಕಳ್ಳತನಗಳ ಆಸೆ ಇತ್ತು. ಮೋಸಗಳ ಚಪಲವಿತ್ತು, ಜೂಜು ದುಂದುಗಳ ವಾಂಛಲ್ಯಗಳಿತ್ತು, ಸಿಗರೇಟು ಸೇದಬೇಕೆನ್ನಿಸಿತ್ತು, ಹೆಂಡ ಕುಡಿಬೇಕೆನ್ನಿಸಿತ್ತು. ಮನಸ್ಸು ಕೊಟ್ಟ ವಯಸ್ಸು ಹೆಣ್ಣುಗಳ ಒಡನಾಟದಲ್ಲಿ ಮೈಮರೆಯಬೇಕೆನ್ನಿಸಿತ್ತು. ಬಿಟ್ಟ ಕಣ್ಣು ಬಿಟ್ಟು ಯೌವನದ ಏರಿಳಿತಗಳನ್ನು ದಿಟ್ಟಿಸೋ ಬರ ಇತ್ತು... ಇದ್ಯಾವುದನ್ನೂ ಮಾಡಲಿಲ್ಲ ಕಣೆ... ನಿನ್ನ ಮೆಚ್ಚಿಸೋದಿಕ್ಕೆ.”

ದಿಟ್ಟಿಸ್ತಿದ್ದಾಳೆ!

ಅರ್ಥವಾಗ್ತಿದ್ಯಾ ಇವಳಿಗೆ ನನ್ನ ಮನಸ್ಸಿನ ಮಾತು!

* * * * *


“ಅರ್ಥವಾಗ್ತಿದೆ ಕಣೋ”

‘ಬಾಯಿ ಬಿಟ್ಟು ಹೇಳೋದು ಹ್ಯಾಗೆ. ಸ್ವಂತವಾಗಲಿಲ್ಲ ಅನ್ನೋ ರೊಚ್ಚಿದೆ. “ಬೇಕು ನೀನು... ಆದರೆ ಬಾಯಿ ಬಿಟ್ಟು ಕೇಳಲ್ಲ” ಅನ್ನೋ ಗರ್ವ ಇದೆ. ಅದು ನಿನ್ನ ಶಕ್ತಿ. ಷಂಡರ ಪ್ರಪಂಚದಲ್ಲಿ ಗಂಡಸಾಗಿ ಮೆರಿತಿದ್ದೀಯ. ಆಸೆ ಇವೆ ನನಗೂ. ಹರೆಯ ಕರಗದ ಎದೆಯ ಮೇಲೆ ಒರಗೋ ಭಾವದ್ದು. ತೋಳ ತೆಕ್ಕೆಯಲ್ಲಿ ಕರಗಿ ಹೋಗೋ ಭಾವದ್ದು. ನಿನ್ನೆಲ್ಲ ಸಾಧನೆಗಳ ರೂವಾರಿ ನಾನು. ಈವತ್ತು ನೀನು ಅವುಗಳೆಲ್ಲದರೊಟ್ಟಿಗೆ ನನಗೆ ಸ್ವಂತ ಅನ್ನೋ ಭಾವದ್ದು. ಬೇಡ, ಮದುವೆಯಾಗಿದೆ ನನಗೆ, ಹಾದರವಾಗತ್ತೆ. ಸಂಯಮದ ಅಡಿಗೆ ಹಳಸತ್ತೆ. ಬೇಡ.’

ಅರ್ಥವಾಯ್ತು ಮನಸ್ಸಿನ ಮಾತು. ಅವನು ಮುಖ ತಿರುಗಿಸಿ ಕಿಟಕಿಯಿಂದಾಚೆ ದಿಟ್ಟಿಸಿದ. ಉಸಿರು ಬಿಟ್ಟೆ ನಾನು.

* * * * *


ಅಕ್ಕ ಪಕ್ಕದ ಮನೆ. ನಾನು ಸ್ಕೂಲಲ್ಲಿದ್ದಾಗ ಇವಳು ಹುಟ್ಟಿದ್ದು. ನಾಮಕರಣಕ್ಕೆ ಹೋಗಿದ್ದೆ ಅಮ್ಮನ ಜೊತೆ. ಹಂಚಿದ್ರು ಕೆಂಪು ಕಲ್ಲು ಸಕ್ಕರೆ... ದವಡೇಲಿ ಊರಿ ಜೊಲ್ಲು ಸುರಿಸಿದ್ದೆ. ಇವಳಮ್ಮ ನನಗಂದಿದ್ರು.

“ಹ್ಯಾಗಿದ್ದಾಳೋ ಮಗಳು? ಮದುವೆ ಮಾಡ್ಕೋತೀಯ! ಮನೆ ಅಳಿಯನ್ನ ಮಾಡ್ಕೋತೀನಿ...ಏನು”

ನಮ್ಮಮ್ಮ ನಕ್ರು. ನಾನು ನಾಚಿಕೊಂಡಿದ್ದೆ. ಮೂಗಿನಿಂದ ಹರಿದ ಸಿಂಬಳವನ್ನು ಜೊಲ್ಲಿನೊಂದಿಗೆ ಸೊರ್ರಂತ ಒಳಗೆಳೆದುಕೊಂಡಿದ್ದೆ. ಅವರು ನಗ್ತಾ ಅಂದ್ರು.

“ಅಪ್ಸರೆ ನನ್ನ ಮಗಳು, ನೀನು ಹೀಗೆ ಸೊರ ಸೊರ ಅಂದ್ರೆ, ಅವಳು ಆಗೋಲ್ಲ ಅಂತಾಳೆ. ನನ್ನ ದೂಷಿಸಬೇಡ”

ಅವತ್ತೆ ಕೊನೆ. ನನ್ನ ಮೂಗಿನಿಂದ ಸಿಂಬಳ ಹರಿದಿದ್ರೆ ಹೇಳಿ. ಮುಖ ನೆಟ್ಟಗೆ ತೊಳಿತಿದ್ನೋ ಇಲ್ವೋ... ಮೂಗು ಒರೆಸಿಕೊಳ್ಳದಿದ್ರೆ ಕೇಳಿ.

* * * * *


ನನ್ನ primary school ಕಾಲಕ್ಕೆ ಇವನು high school, ಕೈ ಹಿಡಿದುಕೊಂಡು ಕರಕೊಂಡು ಹೋಗ್ತಿದ್ದ ದಿನಾ. ಮರ, ಗಿಡ, ಹಕ್ಕಿ, ಹೂವು, ಹಣ್ಣು, ದನ, ಕರು, ನಾಯಿ, ಬೆಕ್ಕು... ಎಲ್ಲದರ ಪರಿಚಯವೂ ಇವನ ಮೂಲಕವೇ. ಅಮ್ಮ ಆಡಿಕೊಂಡು ನಗೋರು.

“ಏನಂತಾನೆ ನಿನ್ನ ಗಂಡ”

ಗಂಡ, ಗಂಡಸು ಅನ್ನೋ ವ್ಯತ್ಯಾಸಗಳನ್ನು ಅರಿಯದ ವಯಸ್ಸು. ಗೊತ್ತಿದ್ದದ್ದಿಷ್ಟೇ ನಾನು, ಅಮ್ಮ, ಅಜ್ಜಿ ಎಲ್ಲ ಒಂದಾದ್ರೆ ಇವನು ಅಪ್ಪ ಅಣ್ಣನ ಕಡೆ.

ಪಿಳಿ ಪಿಳಿ ಕಣ್ಣು ಬಿಡ್ತಿದ್ದೆ. ಅವರು ಮುಂದುವರೆಸೋರು.

“ಆಸೆ ನೋಡು”!

ನಾಚಿಕೆ ಅನ್ನೋದೆ ಇಲ್ಲ, ಮುಂಡೇದಕ್ಕೆ, ಗಂಡು ಬೀರಿಯಾಗತ್ತೆ.

ಅದಕ್ಕಜ್ಜಿ

“ಅದಕ್ಕೇನರ್ಥವಾಗತ್ತೆ, ಅದಿನ್ನು ಕೂಸು”

ಆದರೊಂದು ನಿಜ. ಮುಂದೆ ನಾನು ಬೆಳಿತಿದ್ದ ಹಾಗೇ ಮನಸ್ಸು ಹೃದಯದಲ್ಲಿ ಗಂಡ ಅನ್ನೋ ಭಾವ ರೂಪುಗೊಳ್ಳುತ್ತಿದ್ದದ್ದು ಇವನ ಆಕಾರದ ಸುತ್ತ. ಮಿಕ್ಕೋರೆಲ್ಲ ಗಂಡಸರ ತರಹ ಕಂಡ್ರೆ ಇವನು ಗಂಡನಾಗಿ ಕಾಣ್ತಿದ್ದ. ಇವನ ಗೆಲುವಿನಲ್ಲಿ ನನಗೆ ಹೆಮ್ಮೆಯಿತ್ತು. ಇವನ ಯೌವನದಲ್ಲಿ ನನಗೆ ಉನ್ಮಾದವಿತ್ತು, ಇವನ ಹರೆಯದಲ್ಲಿ ನನ್ನ ನಾಚಿಕೆಗಳಿದ್ವು. ಇವನದೊಂದು ಭಾಗವಾಗಿ ನಾನು ಬೆಳೀತಿದ್ದೆ.

ಕಣ್ಣಂಚಿನ ನೋಟ ಪ್ರಶ್ನೆ ಕೇಳ್ತಿದೆ.

“ಎಲ್ಲ ಗೊತ್ತಿದ್ರು ಅದ್ಯಾಕೆ ಹಾಗೇ... ಅಪ್ಪ ಅಮ್ಮ ವಯಸ್ಸಿಗೆ ಬರ್ತಿದ್ದ ಹಾಗೇ ಯಾರನ್ನೋ ಗಂಡು ಅಂತ ಕರಕೊಂಡು ಬಂದ್ರು... ಮದುವೆ ಆಗ್ತೀಯ ಅಂದ್ರು, ಗೋಣಾಡಿಸೆದ್ದೆ.”

* * * * *


“ಏನ್ಮಾಡು ಅಂತೀಯ? ಬಂದು ಕೂತ ಗಂಡು ನಿನಗಿಂತ ಜಾಸ್ತಿ ಓದಿದ್ದ, ನಿನಗಿಂತ ಒಳ್ಳೆ ಕೆಲಸದಲ್ಲಿದ್ದ, ನಿನಗಿಂತ ಸುಂದರವಾಗಿದ್ದ. ಹಣಕಾಸಿನ ವಿಷಯದಲ್ಲಿ, ಆಸ್ತಿ ಪಾಸ್ತಿ ವಿಷಯದಲ್ಲಿ, ನಿನಗಿಂತ ಮೇಲಿನ ಸ್ತರದಲ್ಲಿದ್ದ. ಅವನ್ನ ಬೇಡ ಅನ್ನೋಕೆ ನಿನ್ನ ಕಾರಣವಾಗಿ ತೋರಿಸಬೇಕಿತ್ತು. ಪ್ರೀತಿಸ್ತಿದ್ದೀನಿ... ಅದಕ್ಕೆ ಬಂದು ಕೂತೋನು ಬೇಡ, ನೀನು ಬೇಕು ಅನ್ನಬೇಕಿತ್ತು... ಯಾವ ಧೈರ್ಯದ ಮೇಲನ್ನಲಿ... ದೊಡ್ಡ ಗಂಡಸು ನೀನು... ನಿನಗೆ ಬೇಕಿತ್ತು ಅಂತ ಒಂದು ಸೂಚನೆ ಕೊಡೋ ಧೈರ್ಯ ತೋರಲಿಲ್ಲ!”

ಇದು ಅವಳ ಭಾವದಲ್ಲಿದ್ದ ಉತ್ತರ.

ಅವಳು ಹೇಳೋದು ಸರಿ. ವಯಸ್ಸಿಗೆ ಬರ್ತಿದ್ದ ಹಾಗೆ ಅವಳ ಮನೆಯಲ್ಲಿ ಮದುವೆಗೆ ಅವಸರ. ಗಂಡುಗಳನ್ನು ನೋಡೋಕೆ ಶುರು ಮಾಡಿದ್ರು. ನಾನು ಆಗಿದ್ದ ಪರಿಸ್ಥಿತೀಲಿ ಸೂಕ್ತ ಅನ್ನಿಸಿರಲಿಲ್ಲ. ಸೂಕ್ತ ಅಲ್ಲ ಅಂತ ನನಗೇ ಗೊತ್ತಿತ್ತು.

“ಆವತ್ತಿಂದು, ಅವತ್ತಿಗಾಯ್ತು. ಈಗ ಕಷ್ಟದಲ್ಲಿದ್ದೀಯ. ಉತ್ತರ ನನ್ನಲ್ಲಿದೆ... ಆಸೆ ಸತ್ತಿಲ್ಲ. ಏನು? ಏನಂತೀಯ”

* * * * *


“ಕಾಯೋವ್ನು ಗಂಡ! ನಾಶಕ್ಕೆ ಗಂಡಸು!
ಏನಾಗ್ತೀಯ... ಅದು ನಿನಗೆ ಬಿಟ್ಟಿದ್ದು!”

* * * * *


“ಏನಾಗಬೇಕು? ಹೇಳು” ಅಂದೆ

“ಕೆಲಸದಿಂದ ತೆಗೀತೀನಿ ಅಂತ ಹೆದ್ರಿಸ್ತಿದ್ದಾರೆ”

“ಯಾರು?”

“Minister”

“ನಿನ್ನ ಗಂಡ ಏನಂತಾನೇ?”

“ಅವರ ಬಗ್ಗೆ, ಗೊತ್ತಿದೆ ನಿನಗೆ, ತಪ್ಪು ಅವರದಲ್ಲ.”

“ಹೌದು! ಗೊತ್ತು ನನಗೆ, ನಿನ್ನ ಗಂಡ ಸಭ್ಯ. ಅವನಿಗೆ ಈ ಗಬ್ಬು ವ್ಯವಸ್ಥೆ ಒಗ್ಗೊಲ್ಲ.”

“ನೀನು ವ್ಯವಹಾರದಲ್ಲಿರೋನು, ನಿನಗೆ ಎಲ್ಲರ ಪರಿಚಯಗಳಿದೆ. ನೀನು ಮಾಡಿದ್ರಾಗತ್ತೆ.”

“ಆಯ್ತು! ಬಿಡು ನನಗೆ, ಸಂಬಂಧಪಟ್ಟ ದಾಖಲೆಗಳನ್ನ ನಿನ್ನ ಗಂಡನಿಗೆ ತಂದು ಕೊಡೋದಕ್ಕೆ ಹೇಳು. ಮುಂದಿಂದು ನಾನು ನೋಡ್ತೀನಿ.”

* * * * *


ಅವಳ ಕೆಲಸವಾಯ್ತು. ಕೃತಜ್ಞತಾ ಭಾವದಲ್ಲಿ ಬಂದು ಕೂತಳು.

ಕಾದು ಗಂಡನಾಗಿದ್ದೆ. ಅವಳಂದ್ಲು.

“ದಿನ ದೇವರ ಮುಂದೆ ದೀಪ ಹಚ್ಚಿ ಕೈಮುಗೀಬೇಕಾದ್ರೆ ಮೂರ್ತಿ ಮುಖದಲ್ಲಿ, ನೀನು ಕಾಣ್ತೀಯ.”

ಕಣ್ಣಲ್ಲಿ ನಕ್ಷತ್ರಗಳು ಮಿನುಗಿದ್ವು. ಭಗವಂತ ಕಾಣಿಸ್ತಿದ್ದ. ನನ್ನ ಕಣ್ಣಂಚಿನಲ್ಲಿ, ನೀರಿತ್ತು. ಮನುಷ್ಯನಾಗಿದ್ದೆ. ಒತ್ತರಿಸಿ ಬಂದ ಭಾವವನ್ನ ಹೊರಕ್ಕೆ ರಾಚದೆ ಗಂಟಲುಬ್ಬಿ, ನುಂಗಿ ಕಿಟಕಿಯಿಂದಾಚೆ ನೋಡ್ದೆ. ಚೈತ್ರ ಕಾಲಿಟ್ಟಿತ್ತು. ಹೊಂಗೆ ಮರದಲ್ಲಿ ಚಿಗುರಿತ್ತು, ಅವಳ ಮುದ್ದು ಮುಖದಲ್ಲಿ ನಗುವಿತ್ತು. ಬದುಕಿನಲ್ಲಿ ಸುಖವಿತ್ತು. ಪ್ರೀತ್ಸಿದ್ದೀನಿ ಈ ಹೆಂಗಸನ್ನ! ಸುಳ್ಳಲ್ಲ!Note: Any spelling mistake is by the admin of the blog. Please to notify if any!

5 comments:

 1. Bhavanegalu ukki haridide sir, thumba chenagide sir

  ReplyDelete
 2. sir nivu barediruva pustakagalu beku daya madi tilisi .

  ReplyDelete
 3. sir nivu barediruva pustakagalu beku daya madi tilisi .

  ReplyDelete
 4. vasathavadalli heegondu manassugala sambhashane nadiode aadre chenagiroduu..:) thumba chenagide sir..as usual nimma baraha baravanige bhavagala sammilana,tholalata.. super agide..dhanyavadagalu

  ReplyDelete